Tuesday, May 31, 2016

There is a Khasak in All of Our Lives: My Kannada Prabha Column

It has so happened that I ended up writing two articles on The Legends of Khasak in one week. The O V Vijayan masterpiece is a great favourite of mine. It is a book we first bonded over four years ago now. Magic realism is a favourite genre (Gabo, but of course) and this book is a fantastic example of it. The theatre adaptation of it, staged some weeks ago in the city and directed by Deepan Sivaraman, was quite good too.

I wrote about the village of Khasak, how it is based on Thasarak near Palakkad (I will go there one day) and how in the fluid nature of our lives, between fantasies and dreams and reality, we are all Khasak ourselves.

Published in Kannada Prabha on Sunday, May 29, 2016. A slightly unedited version below.

ಕಸಾಕ್ ಎಂಬ ಹಳ್ಳಿಗೆ ತೆರಳಿದ ರವಿಯ ಭೇಟಿ ಕೆಲವು ದಿನಗಳಲ್ಲೇ ಅಲ್ಲಪಿಚ್ಚ ಮುಲ್ಲಾ, ಹಳ್ಳಿಯ ಟೈಲರ್ ಮಾಧವನ್ ನಾಯರ್, ಮೈಮೂನ ಇನ್ನಿತರರ ಜೊತೆ ಆಗುತ್ತದೆ. ಇನ್ನೊಂದಷ್ಟು ದಿನಗಳಲ್ಲಿ ಅವರ ಮಧ್ಯೆ ಇರುವ ರಾಜಕೀಯ, ಅವರ ಕನಸು, ಅಲ್ಲಿನ ವಿಚಿತ್ರ ಕಥೆ - ಅವು ಕಲ್ಪನೆಗಳೊ, ನಿಜವಾದ ಇತಿಹಾಸವೋ, ಇವೆರಡರ ಮಧ್ಯೆ ನಿಂತ ಅದ್ಭುತಗಳೊ ಹೇಳಲು ಅಸಾಧ್ಯ - ಅಲ್ಲಿನ ವಿವರಿಸಲಾಗದಂತಹಾ ಸಹಜ - ಅಸಹಜಗಳ ಸುಳಿಯಲ್ಲಿ ರವಿ ಆಳವಾಗಿ ಸಿಕ್ಕಿಬೀಳುತ್ತಾನೆ. ಕಸಾಕ್ ಮೇಲ್ನೋಟಕ್ಕೆ ಒಂದು ಸಾಧಾರಣ ಹಳ್ಳಿ. ದೇಶದ ಒಂದು ಮೂಲೆಯಲ್ಲಿ ಐದು ಅಂಗೈಯಷ್ಟು ಅಗಲ ವ್ಯಾಪಿಸಿದ್ದು,ಧಾರಾಕಾರ ಮಳೆ ಸುರಿಯುವ ಪ್ರದೇಶ, ಹಚ್ಚ ಹಸಿರು ತುಂಬಿ ತುಳುಕಾಡುವ ಗದ್ದೆ ಬಯಲು, ಅನಿವಾರ್ಯವಾಗಿ ಒಟ್ಟಿಗೆ ಹೊಂದಿಕೊಂಡು ಹೋಗುವ ಹಲವು ಜಾತಿ ಪಂಗಡ ಜನಾಂಗದ ಹಳ್ಳಿಯವರು, ಹೀಗೆ ಈ ದೇಶದ ಲಕ್ಷಾಂತರ ಹಲ್ಲಿಗಳಿಂದ ವಿಶೇಷವಾಗಿ ಬಿನ್ನ ಮಾಡುವಂತಹಾ ಗುರುತುಗಳೇನು ಕಸಾಕ್ ಹಳ್ಳಿಗಿಲ್ಲ. ಆದರೆ ಮೇಲ್ನೋಟದ ಈ ಲೇಸ್ ನಂತಿರುವ ಪರದೆಯನ್ನು ಸರಿಸಿದರೆ ಕಾಲವನ್ನೇ ತಡೆಹಿಡಿದು ತಮ್ಮ ಮನೋರಂಜನೆಗೆಂಬಂತೆ ನಡೆದಾಡುವ ಭೂತ ಪ್ರೇತಗಳು, ಭ್ರಮೆಗಳು, ಕನಸುಗಳು ಇವೆಲ್ಲದರಲ್ಲೇ ಬದುಕುವ ಹಳ್ಳಿ ಈ ಕಸಾಕ್.

ಕಸಾಕ್ ಹಳ್ಳಿಯನ್ನು ಶ್ರಿಷ್ಟಿಸಿದ ಓ.ವಿ. ವಿಜಯನ್ ಮಲಯಾಳಂ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನೂ ಸಹ ಶ್ರಿಷ್ಟಿಸಿದರು. ಅರವತ್ತರ ದಶಕ ಕೊನೆಗೊಳ್ಳುತ್ತಿದಂತೆ ಹೊರಬಂದ 'ಕಸಾಕ್ಕಿಂಟೆ ಇತಿಹಾಸಂ' - ಕಸಾಕಿನ ಇತಿಹಾಸ ಮಲಯಾಳಂ ಸಾಹಿತ್ಯ ಜಗತ್ತನ್ನು ದಿಗ್ಭ್ರಮೆಗೊಳಿಸಿತ್ತಂತೆ. ಪಾಲಕ್ಕಾಡಿನ ಸಮೀಪವಿರುವ ತಸಾರಕ್ ಎಂಬ ಹಳ್ಳಿಯನ್ನು ಪ್ರೇರಣೆಗೆಂದಿಟ್ಟುಕೊಂಡು ವಿಜಯನ್ ಬರೆದ ಈ ಕಾದಂಬರಿಯಲ್ಲಿ ಯಾವುದು ಇರುವಂತದ್ದು, ಯಾವುದು ಕಾಲ್ಪನಿಕ, ಯಾವುದು ಯಾರ ಸತ್ಯ ಎಂಬುದು ಓದುಗರನ್ನು ಪ್ರತಿಯೊಂದು ಸಲ ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ಬದಲುತ್ತಾ ಇರುವಂತವು. ಮಲಯಾಳಂ ಸಾಹಿತ್ಯ ಜಗತ್ತನ್ನು ಕಸಾಕ್ ನ ಮೊದಲು, ಕಸಾಕ್ ನ ನಂತರ ಎಂದೇ ವಿಂಗಡಿಸುವ ಅಭ್ಯಾಸ ಅದೆಷ್ಟೋ ವರುಷಗಳಿಂದ ಮುಂದುವರಿಯುತ್ತಾ ಬಂದಿದೆ. ಮೊಟ್ಟ ಮೊದಲ ಬಾರಿಗೆ ಒಂದು ಹೊಸ ಭಾಷೆಯನ್ನು, ಹೊಸ ಶೈಲಿಯನ್ನು ಅಳವಡಿಸಿ ಬರೆದ ಕಾದಂಬರಿ ಕಸಾಕ್ ಆಗಿತ್ತು. ಒಂದು ನಿರ್ಧಿಷ್ಟ ಕಥೆ ಇಲ್ಲದ, ಸಾಂಪ್ರದಾಯಿಕ ಬರವಣಿಗೆಯ ದ್ರಿಷ್ಟಿಯಲ್ಲಿ ನೋಡಿದರೆ ಕಥೆಯಲ್ಲಿ ಏನು ಆಗದ ಪುಸ್ತಕ ಕಸಾಕ್. ಮ್ಯಾಜಿಕ್ ರಿಯಲಿಸಂ ಎಂಬುವ ಶೈಲಿಯೊಂದನ್ನು ಸುಪ್ರಸಿದ್ದ ಮಾಡಿದ ಕೊಲಂಬಿಯಾ ದೇಶದ ಗೇಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ತನ್ನ ಅದ್ಭುತ ಕಾದಂಬರಿ 'ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್' ಸಮಯದಲ್ಲೇ ಕಸಾಕ್ ಕೂಡ ಪ್ರಕಟವಾದದ್ದು. ಸಂಬಂಧವಿಲ್ಲದ ಎರಡು ಭಾಷೆಗಳಲ್ಲಿ, ಪರಸ್ಪರ ಹೆಸರೇ ಕೇಳದ ಲೇಖಕರಿಬ್ಬರು ಇಂತಹಾ ಬಲು ಕಟಿಣ ಶೈಲಿಯಲ್ಲಿ ಎರಡು ಮಾಸ್ಟರ್ ಪೀಸ್ ಗಳನ್ನು ಬರೆದಿದ್ದರು ಎಂಬುದು ಶ್ರುಜನಶೀಳತೆಯ ಬಗ್ಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ವ್ಯಕ್ತಿ ಬೆಳೆದು ಬಂದ ವಾತಾವರಣ, ಭಾಷೆ, ಜನ ಸಂಪರ್ಕ, ವಿದ್ಯಾಭ್ಯಾಸ, ಇದ್ಯಾವುದೂ ಕಲೆ, ಬರವಣಿಗೆ, ಸಂಗೀತ, ಇನ್ನಿತರ ಪ್ರತಿಭೆಯನ್ನು ತೀರ್ಮಾನಿಸುವುದಿಲ್ಲ. ಅದೆಷ್ಟೋ ಸಾಕ್ಷಿಗಳು, ಉದಾಹರಣೆಗಳು ನಮಗೆಲ್ಲರ ಕಿವಿಗೆ ಬೀಳುವುದಿಲ್ಲವೇ?

ಈ ಕಾದಂಬರಿಯನ್ನು ಇನ್ನೊಂದು ಸಂಧರ್ಭದಲ್ಲಿ ಉದಾಹರಣೆಗೆಂದು ಇಟ್ಟುಕೊಳ್ಳಲಾಗುತ್ತದೆ. ವಿಜಯನ್ ಅವರು ಅರವತ್ತರ ದಶಕದಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ರಾಜಕೀಯದ ಬೆಳವಣಿಗೆಯ ವಾತಾವರಣದಲ್ಲಿ ಕಸಾಕ್ ಅನ್ನು ಬರೆದ್ದದ್ದು. ಆಗಿನ್ನೂ ಯುವಕನಾಗಿದ್ದ ವಿಜಯನ್ ಅವರು ಸುಮಾರು ಮೂರು ದಶಕಗಳ ನಂತರ ತಾವೇ ಕಸಾಕ್ ಅನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದರು. ಆಗ ತಮ್ಮ ಯೋಚನೆಗಳಲ್ಲಿ, ಅದ್ಯಾತ್ಮಿಕ ಅನಿಸಿಕೆಗಳಲ್ಲಿ ಬದಲಾವಣೆಗಳು ಸಹಜವಾಗಿ ಆಗಿದ್ದ ವಿಜಯನ್ ಅನುವಾದಿಸುತ್ತ ಅದನ್ನು ಬೇರೆಯೇ ಒಂದು ಕಾದಂಬರಿಯಾಗಿ ಬರೆದರು ಎಂಬ ಅನಿಸಿಕೆ ವಿಮರ್ಶಕರದ್ದು. ಒಬ್ಬ ಲೇಖಕ ತನ್ನದೇ ಕೃತಿಯನ್ನು ಅನುವಾದಿಸಿದಲ್ಲಿ ಆ ಅನುವಾದವನ್ನು ಎಷ್ಟರ ಮಟ್ಟಿಗೆ ನಂಬಬಹುದು? ಇನ್ನೊಂದೆಡೆ ಒಂದು ಕೃತಿಯ ಸೂಕ್ಷ್ಮ ಒಳ ಅರ್ಥಗಳನ್ನು ಅದರ ಲೇಖಕನಿಗಿಂತ ಹೆಚ್ಚಾಗಿ ತಿಳಿದವರು ಬೇರೆ ಇಲ್ಲದಿರುವಾಗ ಲೇಖಕನ ಅನುವಾದವೇ ಮೂಲ ಕೃತಿಗೆ ಹತ್ತಿರವಿರುವಂತದ್ದು ಎಂಬ ವಾದ. ಅನುವಾದ ಕುರಿತಂತೆ ಕಸಾಕ್ ಕೃತಿಯನ್ನು ಈ ಎರಡು ದಿಕ್ಕಿನ ವಾದಗಳಿಗೆಂದು ಬಳಸಲಾಗುತ್ತದೆ.

ಮ್ಯಾಜಿಕ್ ರಿಯಲಿಸಂ ಎಂಬುವುದು ನನಗೆ ಒಂದು ಕವನದಂತೆ. ಅಥವಾ ತಿಳಿಯದ ಭಾಷೆಯಲ್ಲಿನ ಒಂದು ಹಾಡಿನಂತೆ ಎನ್ನಬಹುದು. ಅದರ ಅರ್ಥ ಹೇಳಿಸಿಕೊಂಡು ಅರ್ಥಮಾಡಿ ಕೊಳ್ಳುವುದಕ್ಕಿಂತಲೂ ಅವನ್ನು ಅನುಭವಿಸುವುದು ಒಳ್ಳೇದು ಎಂದು ನಾನು ನಂಬುತ್ತೇನೆ. ಆ ಪುಸ್ತಕವನ್ನು ನಾನು ಮೊದಲು ಓದಿದ್ದು ಒಂದು ನಾಲ್ಕು ವರ್ಷಗಳ ಹಿಂದೆ. ಅಂದಿನಿಂದ ಇಲ್ಲಿಯವರೆಗೆ ಅದನ್ನು ಮತ್ತೆ ಹಿಡಿದಿದ್ದೇನೆ. ಪ್ರತಿ ಬಾರಿಯೂ ಅದು ಒಂದು ಹೊಸ ರೀತಿಯಲ್ಲಿ ಅರ್ಥವಾಗುತ್ತದೆ.

ಸಾಹಿತಿ ಸತ್ಚಿದಾನಂದನ್ ಅವರು ಕ್ಲಾಸಿಕಲ್, ಶ್ರೇಷ್ಠ ಸಾಹಿತ್ಯದ ಬಗ್ಗೆ ಬರೆಯುತ್ತ, ಶ್ರೇಷ್ಠ ಸಾಹಿತ್ಯದ ಬಗ್ಗೆಗಿನ ಕುತೂಹಲ, ಆಕರ್ಷಣೆ ಇರಲು ಕಾರಣ ಅವು ತಾವು ಏನು ಹೇಳಬೇಕಾದುದ್ದನ್ನು ಹೇಳಿ ಮುಗಿಸಿರುವುದಿಲ್ಲ ಎಂದು ಹೇಳುತ್ತಾರೆ. ಅಂದರೆ ಕ್ಲಾಸಿಕಲ್ ಸಾಹಿತ್ಯದಲ್ಲಿ ಮತ್ತೆ ಮತ್ತೆ ಅದರತ್ತ ಹೋದರೂ ಹೊಸದೊಂದು ದ್ರಿಷ್ಟಿಯಿಂದ ತನ್ನ ಕಥೆಯನ್ನು, ತನ್ನ ಗುಟ್ಟನ್ನು ಬಿಚ್ಚುತ್ತದೆ. ನಮ್ಮನು ಇಂತಹಾ ಸಾಹಿತ್ಯ (ಸಂಗೀತ, ಕವನ, ಸಿನಿಮಾ ಎಲ್ಲದಕ್ಕೂ ಇದು ಅನ್ವಯಿಸುತ್ತದೆ) ತಲುಪುವಷ್ಟರಲ್ಲಿ ಅದರನ್ನು ಹಿಂದೆ ಓದಿದವರ ಗುರುತುಗಳು ಸೇರಿರುತ್ತವೆ. ಇಂತಹಾ ಸಾಹಿತ್ಯ ಸಂಸ್ಕೃತಿಯ ಮೇಲೆ ಬೀರಿರುವ ಪ್ರಭಾವದ ಸುಳಿವುಗಳು ಭಾರವನ್ನು ಹೊತ್ತುಕೊಂಡು ಬರುತ್ತವೆ. ಓದುಗರ ಮತ್ತು ಸಾಹಿತ್ಯದ ಮಧ್ಯೆ ಇರುವ ಸಂಬಂಧ ವಿಶೇಷ, ಅಗತ್ಯ. ಒಂದು ಕೃತಿಯನ್ನು ದ್ವೆಶಿಸಿದರೂ, ನಿರಾಕರಿಸಿದರೂ, ಆ ಕೃತಿ ತಂದ ಇತಿಹಾಸವನ್ನು, ಅದು ಸಾಮಾಜಿಕ, ರಾಜಕೀಯ ಪರಿಸರದ ಮೇಲೆ ಬೀರುವ ಪ್ರಭಾವವನ್ನು ನಿರ್ಲಕ್ಷಿಸಲು ಅಸಾಧ್ಯ. ಶ್ರೇಷ್ಠ ಸಾಹಿತ್ಯ ಸಾಗಿಬಂದ ಪ್ರತಿಯೊಂದು ಕಾಲದಲ್ಲಿ ಅದು ಸಮಂಜಸವಾಗಿರುತ್ತದೆ.

ಮೊನ್ನೆ ಕಸಾಕ್ ವಿಷಯದಲ್ಲಿ ಹಾಗೆ ಆಯಿತು. ದೀಪನ್ ಶಿವರಾಮನ್ ಎಂಬುವ ಹೆಸರುವಾಸಿಯಾದ ರಂಗಕರ್ಮಿ, ನಾಟಕ ನಿರ್ಧೇಶಕ ಕಸಾಕ್ ಅನ್ನು ಪುಸ್ತಕದಿಂದ ರಂಗಕ್ಕೆ ತರುವ ಪ್ರಯತ್ನ ಮಾಡಿದರು. ಪ್ರಯತ್ನ ಅದ್ಭುತ ಎಂದೆನಿಸದಿದ್ದರೂ ಮ್ಯಾಜಿಕ್ ರಿಯಲಿಸಂನಲ್ಲಿ ತಿಳಿದ ಮಟ್ಟಿಗೆ ಭಾರತದಲ್ಲಿ ಹೊರಬಂದ ಮೊದಲ ಕೃತಿ ಎಂದೆನಿಸಿಕೊಳ್ಳುವ ಕಸಾಕ್ ಅನ್ನು ಪ್ರಯತ್ನಿಸಿದಕ್ಕೆ ರಂಗ ತಂಡವನ್ನು ಮೆಚ್ಚಲೇಬೇಕು. ಯಾವುದೇ ಕಥೆಯನ್ನು ಹೇಳದ ನಾಟಕದಲ್ಲಿಯೂ ಒಂದು ಅನುಭವದ ಶ್ರಿಷ್ಟಿಯಾಗುತ್ತದೆ. ಬೆಂಕಿ, ಮಳೆ, ಪರಿಮಳ, ಹೀಗೆ ಭೂಮಿಯನ್ನು ಅನುಭವಿಸುವ ನಾಟಕ ಶಿವರಾಮನ್ ರವರ ಕಸಾಕ್. ಮೂರೂವರೆ ಗಂಟೆಯ ನಾಟಕ ಮುಗಿದ ಮೇಲೆ ಒಂದು ಅನುಭವದ ಜೊತೆ ಪ್ರೇಕ್ಷಕರು ಹಿಂತಿರುಗುತ್ತಾರೆ. ಇದೆಲ್ಲದರ ಮಧ್ಯೆ ಅದೆಲ್ಲೋ ಕಲ್ಪನೆ ಮತ್ತು ವಾಸ್ತವದ ನಡುವಿನಲ್ಲಿರುವ ಗೆರೆಗಳು ಮಾಸುತ್ತಾ ಹೋಗುತ್ತವೆ.

ಕಾಣುವ ಕನಸು, ನೆನಪಿಟ್ಟುಕೊಳ್ಳುವ ಭಾವನೆಗಳು, ಎಲ್ಲೋ ಕೇಳಿದ ಕಥೆಗಳು, ನೋಡುವ ದೃಶ್ಯ, ಬದುಕುವ ವಾಸ್ತವ ಎಲ್ಲವೂ ಸುತ್ತಿ ಹೆಣೆದ ಬಲೆಯಲ್ಲಿ ನಮ್ಮ ವಾಸ್ತವ ಕಸಾಕ್ ಹಳ್ಳಿಯಾಗುತ್ತದೆ. ನಮ್ಮ ವಯ್ಯಕ್ತಿಕ ವಲಯದಲ್ಲಿ ಕಸಾಕ್ ಹಳ್ಳಿ ನಾವಾಗುತ್ತೇವೆ, ಹಳ್ಳಿಯ ಜನರು ನಮ್ಮ ಬದುಕಗುತ್ತಾರೆ. ಎಲ್ಲವು ಚಲಿಸುವ, ಬದಲಾಗುತ್ತಲಿರುವ ಸಂಧರ್ಭಗಳ, ಸನ್ನಿವೇಶಗಳ ಗೊಂಚಲನ್ನು ಒಟ್ಟು ಸೇರಿಸಿದಾಗ ಜೀವನ ಎಂದು ಕರೆಯಲ್ಪಡುತ್ತದೆ.

No comments: