Tuesday, January 12, 2016

On Bacha Bazi, Pederasty, Child Abuse: In Binkana, Kannada Prabha

What a horror it is, the practice of bacha bazi, where young boys are 'kept' by older men in Afghanistan and are made to dress up in girls' clothes and dance at parties. The boys are of course passed around for the older men's pleasure. Apparently, there is a saying in that country, that women are to beget children and boys are for pleasure. 

Pederasty, a word I learnt only recently, is the relationship between a young boy and an older man. Such relationships were accepted as normal and even celebrated in ancient Greek and Roman civilisations. It has inspired much art and literature. In retrospect, such relationships are now being termed child abuse and pedophilia.

In the name of tradition and culture, nearly everything is expected to be accepted and continued. I write on the hypocrisy of such traditions and culture that I'd rather have disappear, in this week's Binkana column in Kannada Prabha. See below.

Published Sunday, January 10, 2016.

ಅಲ್ಲೊಂದು ತರಹದ ಬಚ್ಚಾ ಬಾಜಿ
ಇಲ್ಲೊಂದು ತರಹದ ತಲೆನೋವು  


ಅಫ಼ಘಾನಿಸ್ತಾನದ ತಾಲಿಬಾನ್ ಅದೊಂದು ಒಳ್ಳೆ ಕೆಲಸವನ್ನು ಮಾಡಿತ್ತು. 1994-2001ನ ತಾಲಿಬಾನ್ ಆಡಳಿತದಲ್ಲಿ ಬಚ್ಚಾ ಬಾಜಿ ಸಂಪ್ರದಾಯವು ನಿಷೇಧಿಸಲಾಗಿದ್ದು, ಅದರಲ್ಲಿ ತೊಡಗಿದವರಿಗೆ ಮರಣ ದಂಡನೆಯನ್ನು ವಿದಿಸಲಾಗುತಿತ್ತು. ಈ ನಿಯಮ ಅದೆಷ್ಟರ ಮಟ್ಟಿಗೆ ಪರಿಪಾಲಿಸಲಾಗಿತ್ತು ಎಂಬುದು ಪ್ರಶ್ನೆಯಲ್ಲ. ತಾಲಿಬಾನ್ ಆಡಳಿತ ಮುಗಿದು ಅಮೆರಿಕಾದ ಪಡೆಗಳ ಅಡಿಯಲ್ಲಿ ಈ ಪದ್ದತಿ ಪುನಃ ತಲೆಯೆತ್ತಿದೆ. ಬಚ್ಚಾ ಬಾಜಿಯನ್ನು ಅಕ್ಷರಶಃ ಅನುವಾದಿಸಿದರೆ 'ಮಗು/ಹುಡುಗ ಆಟ' ಆಗುತ್ತದೆ. ಅಫ಼ಘಾನಿಸ್ತಾನದಲ್ಲಿ ಸಣ್ಣ ವಯಸ್ಸಿನ ಹುಡುಗರು ಹುಡುಗಿಯರ ವೇಷ ಧರಿಸಿ ಗಂಡಸರ ಪಾರ್ಟಿಗಳಲ್ಲಿ ಕುಣಿಯುವುದನ್ನು ಬಚ್ಚಾ ಬಾಜಿ ಎಂದು ಕರೆಯುತ್ತಾರೆ. ಪಾರ್ಟಿಯ ನಂತರ ಈ ಹುಡುಗನ ಮಾಲೀಕ, ಅಥವಾ 'ಬಾಜ್' ಅವನೊಟ್ಟಿಗೆ ಮಲಗುವುದರ ಜೊತೆಗೆ ತನ್ನ ಸ್ನೇಹಿತರಲ್ಲಿ ಈ ಬಾಲಕನನ್ನು ಹಂಚಿಕೊಳ್ಳುತ್ತಾನೆ. ಈ ಅಂದವಾಗಿರುವ ಹುಡುಗರು ಬಡ ಕುಟುಂಬದವರು, ಕೆಲಸ-ವಿದ್ಯೆ ನೀಡುವುದಾಗಿ ನಂಬಿಸಿ ಈ ಮಾಲೀಕರು ಅವರ ಕುಟುಂಬದಿಂದ ಖರೀದಿಸಲಾದವರು. ಅತ್ಯಾಚಾರವನ್ನು ತಡೆಯಲಾರದೆ, ಓಡಿಹೋಗಿ ಸಮಾಜದಲ್ಲಿ ಬೇರೊಂದು ಜೀವನವನ್ನು ಕಲ್ಪಿಸಿಕೊಳ್ಳುವ ಅವಕಾಶವಿಲ್ಲದೆ ಈ ಬಾಲಕರು ಹದಿಹರೆಯುವ ಮುನ್ನವೇ ಕುಡಿತ, ಡ್ರಗ್ ಅಡಿಕ್ಟ್ ಗಳಾಗುತ್ತಾರೆ. ಹದಿನೆಂಟು ವರುಷ ಆಗುವಷ್ಟರಲ್ಲಿ ಮಾಲೀಕರ ಆಸಕ್ತಿ ಕಳೆದ ಮೇಲೆ ಬೀದಿಪಾಲಾಗದಿದ್ದರೆ ತಾವು ಬೇರೆ ಸಣ್ಣ ಹುಡುಗರ ಮಾಲೀಕರಾಗುತ್ತಾರೆ. ಹೀಗೆ ಈ ಕ್ರೂರ ಸಂಪ್ರದಾಯವು ತಲೆತಲಾಂತರದಿಂದ ಮುಂದುವರಿದುಕೊಂಡು ಬಂದಿದೆ. ಮಕ್ಕಳ ಹಕ್ಕು ಸಂಸ್ಥೆಗಳ, ಅಂತರರಾಷ್ಟ್ರೀಯ ಸಮಾಜದ ನಿಗಾಹವನ್ನು ಮೀರಿ ಮುಂದುವರಿಯುತ್ತಲಿದೆ.

ಕೆಲವು ತಿಂಗಳ ಹಿಂದೆ ಅಮೇರಿಕಾದ ಪತ್ರಿಕೆಯೊಂದರಲ್ಲಿ ಬಂದ ವರದಿಯ ಪ್ರಕಾರ ಅಮೇರಿಕಾದ ಪಡೆ ಸಿಬ್ಬಂದಿಗಳಿಗೆ ಈ ಸಂಪ್ರದಾಯ ಕಂಡುಬಂದಲ್ಲಿ, ಪ್ರಮುಖವಾಗಿ ತಮ್ಮ ಮೈತ್ರಿ ಪಡೆಗಳಲ್ಲಿ ಕಂಡುಬಂದರೆ, ಅದನ್ನು ನಿರ್ಲಕ್ಷಿಸುವಂತೆ, ಹುಡುಗರ ಬಲಾತ್ಕಾರವನ್ನು ಗಮನಿಸದಂತೆ ಇರಲು ಹೇಳಲಾಗಿದೆಯಂತೆ. ಈ ದೌರ್ಜನ್ಯ ಆ ಸಮಾಜದ ಸಾಂಸ್ಕೃತಿಕ ಸಂಪ್ರದಾಯವಾಗಿದ್ದು ಅದರತ್ತ ಗಮನಹರಿಸುವುದು ಬೇಡವೆಂದು ಹೇಳಲಾಗಿದೆಯಂತೆ. ಈ ವರದಿಯು ಅಂತರರಾಷ್ಟ್ರೀಯ ಸಮುದಾಯದ ಗಮನ ಸಳೆದು ಭಾರೀ ಸದ್ದು ಮಾಡಿದಾಗ ಅಮೇರಿಕಾದ ಸರ್ಕಾರವು ಇದನ್ನು ನಿರಾಕರಿಸುವ ಹೇಳಿಕೆಯನ್ನು ನೀಡಬೇಕಾಯಿತು. ಈ ವರದಿ ಮಾಡಿದ ಸದ್ದು ಮಾಸಿಹೋಗಿ ಸಂಪ್ರದಾಯದ ಹೆಸರಿನಲ್ಲಿ ಮಕ್ಕಳ ಬಲಾತ್ಕಾರ ಮುಂದುವರಿಯುತ್ತಲಿದೆ ಎಂದು ಮಾನವ, ಮಕ್ಕಳ ಹಕ್ಕು ಸಂಸ್ಥೆಗಳು ಹೇಳುತ್ತವೆ.

ಅಫ಼ಘಾನಿಸ್ತಾನದಲ್ಲಿ ಒಂದು ವಾಡಿಕೆಯ ಮಾತಿದೆಯಂತೆ, ಹೆಂಗಸರು ಮಕ್ಕಳಿಗಾಗಿ, ಹುಡುಗರು ವಿನೋದಕ್ಕಾಗಿ ಎಂದು. ಸಲಿಂಗ ಪ್ರೇಮ ಶಾರಿಯ, ಇಸ್ಲಾಂ ಧರ್ಮದಲ್ಲಿ ನಿಷೇದವಾದರೂ ಈ ಬಚ್ಚಾ ಬಾಜಿ ಸಂಪ್ರದಾಯ, ಹಿಂದಿನಿಂದ ಬಂದ ಸಂಸ್ಕೃತಿ ಎಂದು ಧರ್ಮ, ಸಮಾಜ, ನೈತಿಕ, ಕಾನೂನಿನ ಹೊರಗೆ, ಇವೆಲ್ಲವನ್ನು ಮೀರಿ ನಿಂತಿದೆ. ದುಃಖದ ವಿಷಯವೇನೆಂದರೆ ಈ ಪದ್ಧತಿ ಅಫ಼ಘಾನಿಸ್ತಾನಕ್ಕೆ ಮಾತ್ರ ಸೀಮಿತವಾದದ್ದಲ್ಲ. ಬ್ರಿಟನ್, ಜಪಾನ್, ಚೀನಾ, ಅಮೇರಿಕಾ ಸೇರಿದಂತೆ ಜಗತ್ತಿನ ಹೆಚ್ಚು ಕಮ್ಮಿ ಎಲ್ಲಾ ಪ್ರಮುಖ ದೇಶಗಳಲ್ಲಿ ಬೇರೆ ಬೇರೆ ರೂಪದಲ್ಲಿ ಗಂಡಸರು ಮತ್ತು ಹುಡುಗರ ಸಂಬಂಧ ನಡೆಯುತ್ತಿದ ದಾಖಲೆಗಳಿವೆ. ಇಂತಹಾ ಸಂಬಂಧಗಳು ಸಲಿಂಗ ಪ್ರೇಮದಿಂದ, ಪೀಡೊಫಿಲಿಯಾದ ಚೌಕಟ್ಟಿನ ಹೊರಗಿರುವಂತದ್ದು. ಪುರಾತನ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳಲ್ಲಿ ಇಂಗ್ಲಿಷ್ನಲ್ಲಿ ಪೆಡೆರಸ್ಟಿ ಎಂದು ಕರೆಲ್ಪಡುವ ಇಂತಹಾ ಸಂಬಂದಗಳನ್ನು ಪ್ರಶಂಸಿಸಲಾಗುತ್ತಿತ್ತು. ಒಬ್ಬ ಹುಡುಗ ತನ್ನ ಪರಿವಾರದಲ್ಲದ ಒಬ್ಬ ಗಂಡಸಿನೊಂದಿಗೆ ಹತ್ತು-ಹನ್ನೊಂದು ವರುಷದಿಂದ ಇಪ್ಪತ್ತರ ಹರೆಯದವರೆಗೆ ಸಂಬಂಧ ಬೆಳೆಸಿ, ಆ ಹಿರಿಯವನು, ಹುಡುಗನಿಗೆ ಜಗತ್ತಿನ ವಿಷಯದ ಪರಿಚಯ, ಕಲೆ, ಸಾಹಿತ್ಯ, ಆಸಕ್ತಿಕರವಾಗಿ, ಹೆಂಗಸರನ್ನು ಸಂತೋಷ ಪಡಿಸುವ ವಿಧಾನಗಳ ಬಗ್ಗೆ ಕಲಿಸುತ್ತಿದ್ದನಂತೆ. ಈ ಚಿಕ್ಕ ಹುಡುಗ ಬೆಳೆದ ನಂತರ ಹುಡುಗಿಯೊಬ್ಬಳನ್ನು ಮದುವೆಯಾದರೂ, ಇನ್ನೊಬ್ಬ ಹುಡುಗನನ್ನು ಸಾಕುತ್ತಿದ್ದು, ಈ ಪದ್ದತ್ತಿಯನ್ನು ಮುಂದುವರಿಸುತ್ತಿದ್ದನಂತೆ. ಚಿಕ್ಕ ಹುಡುಗರನ್ನು ಆಕರ್ಷಿಸಲು ಗಂಡಸರು ಅದೆಷ್ಟೋ ಕಷ್ಟಪಡಬೇಕಾಗುತ್ತಿತ್ತಂತೆ. ಪ್ರೇಮ ಪತ್ರ, ಹಣ, ಉಡುಗೊರೆಗಳಿಗೆ ಒಲಿದರೆ ಸಮಾಜದಲ್ಲಿ ಈ ಗಂಡಸರ ಸ್ಥಾನ, ಗೌರವ ಏರುತ್ತಿತ್ತಂತೆ. ಅಫ಼ಘಾನಿಸ್ತಾನದಲ್ಲಿ ಇಂತಹಾ ಹುಡುಗರು ಇದ್ದಷ್ಟು ಆ ಮಾಲಿಕನ ಗಣ್ಯತೆ ಏರುತ್ತದೆಯಂತೆ.

ಪೆಡೆರಸ್ಟಿಯು ಪ್ರಾಚೀನ ಶ್ರೇಷ್ಠ ಕಲೆ, ಸಾಹಿತ್ಯದಲ್ಲಿ ಅದೆಷ್ಟೋ ಕಂಡುಬರುತ್ತದೆ. ಅಪ್ಪ ನೆಟ್ಟ ಆಲದಮರಕ್ಕೆ ಕಟ್ಟಿದ ಬೆಕ್ಕಿನಂತೆ ಈ ಪೆಡೆರಸ್ಟಿಯಿಂದ ಬಂದ ಕಲೆ, ಸಾಹಿತ್ಯವನ್ನು ರೋಮಂಚಿಸಿ ನೋಡುವ ಅಭ್ಯಾಸದಿಂದ ಈ ಕೂಡಲೇ ಹೊರಬರುವ ಅವಶ್ಯಕತೆಯಿದೆ. 'ಸಂಪ್ರದಾಯ', 'ಸಂಸ್ಕೃತಿ' ಎಂದು ಹೆಸರಿಟ್ಟ ಮಾತ್ರಕ್ಕೆ ಯಾವುದೇ ರೀತಿಯ ದೌರ್ಜನ್ಯವನ್ನು ಅವಲಕ್ಷಿಸುವ ಈ 'ಪೊಲಿಟಿಕಲ್ ಕರೆಕ್ಟ್' ನಡವಳಿಕೆಯಷ್ಟು ಅಪಾಯಕಾರಿ ಇನ್ಯಾವುದಿಲ್ಲ.

ಮನೆಯೊಳಕ್ಕೆ ಕಣ್ಣಾಯಿಸಿದರೆ ನಮ್ಮ ದೇಶದಲ್ಲಿ ಅದೆಷ್ಟು ಇಂತಹಾ 'ಸಂಪ್ರದಾಯ-ಸಂಸ್ಕೃತಿಗಳಿಲ್ಲ'? ಬೇರೆಲ್ಲಾ ವಿಷಯಗಳನ್ನು ಬಿಟ್ಟು ಕೇವಲ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಬಂದರೆ ಸಾಕು, ನಮ್ಮಲಿ ಪ್ರತಿಯೊಬ್ಬರೂ ಅನುಭವಿಸಿರಬಹುದಾದ, ಅಥವಾ ಕೇಳಿಪಟ್ಟಿರುವ ಅತ್ಯಾಚಾರದ ಕಥೆಗಳಿವೆ. ಹಿಂದಿನ ಕಾಲದ ಗುರುಕುಲಗಳಿರಬಹುದು, ಈ ಮಾಡ್ರನ್ ಕಾಲದ ಬೋರ್ಡಿಂಗ್ ಶಾಲೆಗಳಿರಬಹುದು, ಇವುಗಳಲ್ಲಿ ಪೆಡೆರಸ್ಟಿ ಹಲವು ವಿಧಗಳಲ್ಲಿ ತಲೆಯೆತ್ತುವ ಉದಾಹರಣೆಗಳು ನಮಗೆಲ್ಲ ಗೊತ್ತಿರುವ, ಅದೆಷ್ಟೋ ಸಾರಿ ಕೇಳಿದ ಕಥೆಗಳು. ಮನೆಯೊಳಗೇ, ನೆಂಟರಿಂದ, ಪೋಷಕರಿಂದಾದ ಅತ್ಯಾಚಾರದ ಕಥಗಳು ಮುಚ್ಚಿಡುವ ಇನ್ನೊಂದು ಸಂಪ್ರದಾಯ-ಸಂಸ್ಕೃತಿ ನಮ್ಮದು. ಸಭ್ಯ ಸಮಾಜದಲ್ಲಿ ಇಂತಹಾ ವಿಷಯಗಳನ್ನು ಪ್ರಸ್ತಾಪಿಸುವುದು ಒಳ್ಳೆ ವರ್ತನೆಯಲ್ಲವಂತೆ. ಮಕ್ಕಳ ಅತ್ಯಾಚಾರದ ಕಥೆಗಳು ಬಾಲ್ಯದ ಕುಂಟೆಬಿಲ್ಲೆಯ, ಬೇಸಿಗೆಯಲ್ಲಿ ಮಾವಿನಹಣ್ಣು ತಿಂದ ನೆನಪಿನಷ್ಟು ಸಾಮಾನ್ಯ. ಅಂತೂ ಇದರ ಬಗ್ಗೆ ಎಚ್ಚರಿಸುವ ವಿಷಯವಾಗಲಿ, ಅತ್ಯಾಚಾರಿಗಳನ್ನು ಎದುರಿಸುವುದಾಗಲಿ, ಮಕ್ಕಳಿಗೆ ಆದ ಅತ್ಯಾಚಾರ ಅವರ ತಪ್ಪಲ್ಲವೆಂದಾಗಲಿ ಕೇಳುವ ಸಂಪ್ರದಾಯ, ಇಂತಹಾ ಪದ್ದತಿಗಳನ್ನು ಹೊಗಳುವ, ಎಗ್ಜೊಟಿಕ್ ಎಂದು ಕೊಂಡಾಡದಿರುವ ಸಂಸ್ಕೃತಿ ಬರುವವರೆಗೆ ಹೊಸ, ಹಳೆಯ ಸಮಾಜಗಳು ತಮ್ಮ ಹಿಂದುಳಿದ ಅಭ್ಯಾಸಗಳನ್ನು ಬಿಡುವ ಹಾಗೆ ಕಾಣುವುದಿಲ್ಲ.

ಅತ್ಯಾಚಾರಕ್ಕೆ ತುತ್ತಾದವರ ತಪ್ಪು ಅದೆಂದೂ ಅಲ್ಲ. ಬಲಾತ್ಕಾರಕ್ಕೆ ಕಾರಣ ತೊಟ್ಟ ಬಟ್ಟೆಯಲ್ಲ, ತಿನ್ನುವ ಚೋಮೆನ್ ಅಲ್ಲ. ಹುಡುಗಿಯರಿಗೆ ಬಲಾತ್ಕಾರಕ್ಕೆ ಅಣುಮಾಡಿಕೊಡಬೇಡಿ ಎನ್ನುವ ಬದಲು ಹುಡುಗರಿಗೆ ಬಲಾತ್ಕಾರ ಮಾಡಬೇಡಿ ಎಂದು ಕಲಿಸುವ ಸಂಪ್ರದಾಯವನ್ನು ಕೈಗೆತ್ತಿಕೊಳ್ಳಬೇಕು. ಬಚ್ಚಾ ಬಾಜಿ ಅಕ್ಷರಶಃ ಅನುವಾದಿಸಿದರೆ ಮಕ್ಕಳ ಆಟವಾಗಿದ್ದು, ನಿಜವಾಗಿಯೂ ಮಕ್ಕಳು ಬೀದಿಗಳಲ್ಲಿ, ಕೆರೆಯ ದಡದಲ್ಲಿ, ಮನೆಯ ಅಟ್ಟದಲ್ಲಿ ನಿಶ್ಚಿಂತೆಯಿಂದ ಆಡುವ ಆಟವಾದಾಗ, ಹಳೆಯದ್ದೆಲ್ಲಾ ಚಿನ್ನವಲ್ಲ ಎಂದು ಒಪ್ಪಿಕೊಂಡಾಗ ಮಾತ್ರ ನಾಗರೀಕತೆಯ ನಿಜವಾದ ಬೆಳವಣಿಗೆಯನ್ನು ಮುಂದೊಂದು ದಿನದ ಇತಿಹಾಸ ಪುಸ್ತಕಗಳಲ್ಲಿ ಅಳೆಯಬಹುದು.

No comments: