Sunday, August 02, 2015

On Harper Lee and the Fallibility of Heroes: Kannada Prabha Column

We all have our heroes. And these heroes always fail us, the moment we decide they are perfect. Heroes are human too, with all the failings of human beings. In the context of Harper Lee's new book Go Set a Watchman being what it is, I write on heroes who fail us in my Kannada Prabha column, Binkana.

A slightly unedited version below.


ಪಟ್ಟ ಕಳೆದುಕೊಳ್ಳುತ್ತಿರುವ ಹೀರೋಗಳ ನಡುವೆ 

ಅದೆಲ್ಲದರಲ್ಲೂ ಅಬ್ಬರ. ಈ ಇಂಟರ್ನೆಟ್, ಸೋಷಿಯಲ್ ಮೀಡಿಯಾದ ಸಹವಾಸದಲ್ಲಿ ಮಾಡಿದ್ದೆಲ್ಲವನ್ನೂ, ಎಲ್ಲರಿಗೂ ತಿಳಿಸಲೇಬೇಕೆನ್ನುವ ಪ್ರಚೋದನೆ.ಪ್ರತಿಯೊಂದು ಸುದ್ದಿ ಟ್ವಿಟರ್‌ನಲ್ಲಿ ದಿನವಿಡೀ ಗುಂಗೇರಿಸದ್ದಿದ್ದರೆ ಅದು ಸುದ್ದಿಯೇ ಅಲ್ಲವೇನೋ ಎಂದೆನಿಸುತ್ತದೆ. ಫೇಸ್‌ಬುಕ್ಕಿನ ಬಗ್ಗೆ ಹೇಳಲಾರೆ.ಅಂದೊಂದು ದಿನ ಆ ಜಗತ್ತಿನ ವಿಪರೀತಗಳಿಂದ ಬೇಸತ್ತು ಪ್ರೊಫೈಲನ್ನು ಡಿಲಿಟ್ ಮಾಡಿ ಈಗ ಮೂರ‌್ನಾಲ್ಕು ವರ್ಷಗಳಾದವು. ಮನೆಯಲ್ಲಿ ಟಿ.ವಿ ಇಟ್ಟುಕೊಳ್ಳದ ನನಗೆ ಜಗತ್ತಿನ ವಿಷಯಗಳು ಸ್ವಲ್ಪವಾದರೂ ಆಗಿಂದಾಗ್ಗೆ ತಿಳಿಯಲಿ ಎಂದು ಒಂದು ಟ್ವಿಟರ್ ಅಕೌಂಟ್ ಇದೆ. ದಿನ ಹೋದಂತೆ ಅದನ್ನು ನೋಡುವುದೂ ಕಡಿಮೆಯಾಗುತ್ತಾ ಬಂದಿದೆ. ಅದರ ವಿಪರೀತಗಳು... ಅದು ವಿಷಯವಲ್ಲ. ಮೊನ್ನೆ ಒಂದು ದಿನ, ಎರಡು ವಾರಗಳ ಹಿಂದೆ ಟ್ವಿಟರ್‌ನಲ್ಲಿ, ಇಂಗ್ಲಿಷ್ ಪುಸ್ತಕ ಲೋಕದಲ್ಲಿ ಈ ಶತಮಾನದ ಅತಿ ದೊಡ್ಡ ಘಟನೆ ನಡೆಯಲಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದರು. ಅದೇನಪ್ಪ ಅಂದರೆ, ಹಾರ್ಪರ್ ಲೀ ಎಂಬ ಲೇಖಕಿಯ ಹೊಸ ಪುಸ್ತಕ ಪ್ರಕಟವಾಗಲಿದೆ.

ಪುಸ್ತಕ ಲೋಕದಲ್ಲಿ ಸಹಸ್ರಾರು ಶೀರ್ಷಿಕೆಗಳು ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಲೀ ಅವರದ್ದು ಒಂದು ಸ್ವಲ್ಪ ವಿಚಿತ್ರ ಕತೆ. ಐವತ್ತೈದು ವರ್ಷಗಳ ಹಿಂದೆ‘ಟು ಕಿಲ್ ಎ ಮಾಕಿಂಗ್ ಬರ್ಡ್’ ಎಂಬ ಪುಸ್ತಕ ಬರೆದು, ಸಾವಿರಾರು ಓದುಗರ ಮೇಲೆ ಪ್ರಭಾವ ಬೀರಿದ ನಂತರ ಲೀ ಮತ್ತೊಂದು ಪುಸ್ತಕ ಬರೆದಿರಲಿಲ್ಲ. ಲೇಖಕರು ಸಮಾಜದಲ್ಲಿ ಬುದ್ಧಿಜೀವಿ, ಸೆಲೆಬ್ರಿಟಿ, ರಾಜಕಾರಣಿ, ಸ್ಟಾರ್ ಹೀಗೆ ಹಲವಾರು ಪಾತ್ರಗಳನ್ನು ತೊಡುವ ಕಾಲದಲ್ಲಿ, ಲೀ ಅವರು ತಮ್ಮದೊಂದು ಪುಸ್ತಕ ಪ್ರಕಟವಾದ ನಂತರ ಅಮೆರಿಕದ ಒಂದು ಪುಟ್ಟ ಊರಿನಲ್ಲಿ ಏಕಾಂತವಾಸಿಯಾಗಿ ತಮ್ಮ ಜೀವನ ಕಳೆಯುತ್ತಿದ್ದಾರೆ. ‘ಟು ಕಿಲ್ ಎ ಮಾಕಿಂಗ್ ಬರ್ಡ್’ ಬರೆದ ನಂತರ ಲೀ ಅವರ ಬರವಣಿಗೆ ಮತ್ತೆಲ್ಲೂ ಪ್ರಕಟವಾಗಲಿಲ್ಲ ಎಂದೆನಿಸುತ್ತದೆ, ಒಂದೆರಡು ಪ್ರಬಂಧಗಳನ್ನು ಹೊರತುಪಡಿಸಿ. ಆ ಅದ್ಭುತ ಪುಸ್ತಕವು ಅಮೆರಿಕದ ದಕ್ಷಿಣ ರಾಜ್ಯಗಳಲ್ಲಿ ನಡೆಯುತ್ತಿದ್ದ ಜನಾಂಗ ಮತ್ಸರದ ಕತೆಯನ್ನು ಹೊಂದಿತ್ತು. ಅಟಿಕಸ್ ಫಿಂಚ್, ಒಬ್ಬ ಬಿಳಿ ವಕೀಲನಾಗಿಯೂ ತನ್ನ ಸಣ್ಣ ಊರಿನಲ್ಲಿ ಬಲಾತ್ಕಾರದ ಆರೋಪ ಹೊಂದಿರುವ ಒಬ್ಬ ಕಪ್ಪು ವ್ಯಕ್ತಿಯ ಪರ ವಾದ ಮಾಡುತ್ತಾನೆ. ಅವನ ಪುಟ್ಟ, ತುಂಟ ಮಗಳು ಸ್ಕೌಟ್ ಎಂಬುವವಳೇ ಈ ಕತೆಯ ನಿರೂಪಕಿ. ಅಟಿಕಸ್ ಫಿಂಚ್‌ನ ನೈತಿಕ ನಿಲುವು, ಅವನು ವಾದ ಮಾಡುವ ರೀತಿ ಅದೆಷ್ಟೋ ಜನರನ್ನು ಕಾನೂನು ಓದಿ ವಕೀಲರಾಗಲು ಪ್ರೇರೇಪಿಸಿದೆಯಂತೆ.ಸೃಷ್ಟಿಸಿದ ಒಂದು ದೊಡ್ಡ ಕೃತಿಗಳ ಸಾಲು ಇಲ್ಲದಿದ್ದರೂ ಇದು ಎಷ್ಟು ಮಹತ್ವದ, ಪ್ರಭಾವಶಾಲಿ ಪುಸ್ತಕವಾಗಿತ್ತೆಂದರೆ, ಲೀ ಅವರಿಗೆ ಅಮೆರಿಕದ ಪ್ರತಿಷ್ಠಿತ ಪುಲಿಟ್ಜರ್ ಪುರಸ್ಕಾರದಿಂದ ಹಿಡಿದು ಎಲ್ಲ ಪ್ರಶಸ್ತಿ, ಗೌರವಗಳನ್ನು ನೀಡಲಾಗಿದೆ. ಇಂತಹ ಪ್ರಸಿದ್ಧಿ ಪಡೆದ ಲೀ ಅವರ ಹೊಸ ಪುಸ್ತಕ ‘ಗೋ ಸೆಟ್ ಎ ವಾಚ್‌ಮ್ಯಾನ್’ ಹೊರಬರುತ್ತಿದೆ ಎಂಬುದು ಈ ಶತಮಾನದ ಅತಿ ದೊಡ್ಡ ಘಟನೆ ಆಗುವುದು ಸಹಜವೇ. 

‘ಟು ಕಿಲ್ ಎ ಮಾಕಿಂಗ್ ಬರ್ಡ್’ ಪುಸ್ತಕವನ್ನು ನಾನು ಚಿಕ್ಕವಳಾಗಿದ್ದಾಗ ಓದಿದ ನೆನಪು. ಮಡಿಕೇರಿಯ ಕಲ್ಲಿನ ಕೋಟೆಯ ಒಳಗೆ ಇರುವ ಜಿಲ್ಲಾ ಗ್ರಂಥಾಲಯದಲ್ಲಿ ಧೂಳು ಹಿಡಿದ ಕಪಾಟಿನಲ್ಲೆಲ್ಲೋ ಇದ್ದ ಪ್ರತಿಯನ್ನು ಅದ್ಯಾವುದೋ ಬೇಸಿಗೆಯ ರಜೆಯಲ್ಲಿ ಓದಿದ್ದೆ. ಎರಡು ತಿಂಗಳಿಡೀ ಗ್ರಂಥಾಲಯದ ಮೂಲೆ ಮೂಲೆಯಿಂದ ಕೈಗೆ ಸಿಕ್ಕಿದ ಎಲ್ಲ ಪುಸ್ತಕಗಳನ್ನೂ ಓದುತ್ತಿದ್ದ ಸುಂದರ ದಿನಗಳವು. ಜನಾಂಗ ಮತ್ಸರ ಎಂದರೇನು ಎನ್ನುವ ಕಲ್ಪನೆ ಪುಟ್ಟ ಊರೊಂದರಲ್ಲಿದ್ದ ನನಗೆ ಇರದ್ದಿದ್ದರೂ ಅದೊಂದು ಒಳ್ಳೆಯ ಪುಸ್ತಕ ಎನಿಸಿತು. ಆದರೆ ಆ ಪುಸ್ತಕದ ಮಹತ್ವ ಅರಿವಾದದ್ದು ಅದೆಷ್ಟೋ ವರ್ಷಗಳ ನಂತರ.

ಈ ಹೊಸ ಪುಸ್ತಕದ ಬಗ್ಗೆ ಓದಿದ ನಂತರ ಅದನ್ನು ಓದಬಾರದು ಎಂದುಕೊಂಡಿದ್ದೆ. ಎಲ್ಲೆಂದರಲ್ಲಿ ಅದರ ಚರ್ಚೆ ನಡೆಯುತ್ತಿರಬೇಕಾದರೆ ತಡೆಯಲಾರದೆ ಓದಿ ಮುಗಿಸಿದೆ. ಒದಬಾರದಿತ್ತೇನೋ. ಜೀವನದಲ್ಲಿ ನಮ್ಮ ಹೀರೋಗಳನ್ನು ಕಣ್ಮುಂದೆ ತರಬಾರದು ನೋಡಿ. ಫಿಲಂ ಹೀರೋ ಒಬ್ಬ ಪಾತ್ರದಾರಿಯಷ್ಟೆ. ಸ್ಕ್ರೀನ್‌ನ ಮೇಲೆ ಕಾಣುವುದು ನೈಜವಲ್ಲ. ‘ಗೋ ಸೆಟ್ ಎ ವಾಚ್‌ಮ್ಯಾನ್’ನಲ್ಲಿ, ಮೊದಲ ಕೃತಿಯ ಸ್ಕೌಟ್ ದೊಡ್ಡವಳಾಗಿ ಈಗ ನ್ಯೂಯಾರ್ಕ್ ನಿವಾಸಿ. ಅಲಬಾಮಾ ರಾಜ್ಯದ ತನ್ನ ಊರಿಗೆ ತಂದೆ ಅಟಿಕಸ್ ಅನ್ನು ನೊಡಲು ಬರುತ್ತಾಳೆ. ಕರಿಯ ಮತ್ತು ಬಿಳಿಯ ಜನರ ಮಧ್ಯೆ ಮತ್ಸರ ಇನ್ನೂ ನಡೆಯುತ್ತಲೇ ಇದೆ. ಸ್ಕೌಟ್‌ಗೆ ಎರಡು ವಾರಗಳ ರಜೆಯಷ್ಟೆ. ಅಷ್ಟರಲ್ಲಿ ತಂದೆ ಫಿಂಚ್, ಅವಳು ಚಿಕ್ಕಂದಿನಲ್ಲಿ ಅಂದುಕೊಂಡಿದ್ದ ನಿಷ್ಪಕ್ಷಪಾತ ಹೀರೊ ಅಲ್ಲವೆಂದು ಅರಿವಾಗುತ್ತದೆ. ಆ ಒಂದು ಗಳಿಗೆಯಲ್ಲಿ ಅವಳ ಮುಗ್ದತೆ ಒಡೆದುಹೋಗುತ್ತದೆ, ಎಲ್ಲರಂತೆ ತನ್ನ ಹೀರೊ ಸಹ ಎಲ್ಲ ವಿಪರೀತಗಳನ್ನು ಹೊಂದಿರುವ ಮನುಷ್ಯ ಎಂದು ಆಕೆಗೆ ಅರಿವಾಗುತ್ತದೆ.

ಹೀರೋಗಳ ಗುಣಲಕ್ಷಣವೇ ಹೀಗೆ. ಚಿಕ್ಕವರಾಗಿದ್ದಾಗ ಕಣ್ಣಿಗೆ ಕಾಣುವ ಹೀರೋಗಳು-ತಂದೆ, ತಾಯಿ ಇರಬಹುದು, ಅಧ್ಯಾಪಕ, ಗೆಳೆಯನ ಅಣ್ಣ, ಅಬ್ದುಲ್ ಕಲಾಂ, ಸಲ್ಮಾನ್ ಖಾನ್, ಇನ್ಯಾರೋ- ಬೆಳೆಯುತ್ತಿದ್ದಂತೆ ಮನುಷ್ಯರಾಗಿ ಮಾತ್ರ ಕಾಣಿಸುತ್ತಾರೆ. ಮನುಷ್ಯತ್ವದ ಎಲ್ಲ ಕುಂದುಕೊರತೆಗಳನ್ನು ಒಳಗೊಂಡವರಾಗಿ ಕಾಣುತ್ತಾರೆ. ಕಿಮ್ ಕರ್ದ್ಯಶಿಅನ್‌ನಂತಹ ಫ್ಯಾಷನ್, ಪಾರ್ಟಿಯನ್ನೇ ಜೀವನವಾಗಿ–ಸಿಕೊಂಡ ಮತ್ತು ಆ ಜೀವನವನ್ನು ಜಗತ್ತಿನ ಮನರಂಜನೆಗೆಂದು ರಿಯಾಲಿಟಿ ಟಿವಿಯಲ್ಲಿ ತೋಡಿಕೊಳ್ಳುವವರು, ಕಷ್ಟದ ಬೆನ್ನೇರಿ ಮುಂದೆ ಬಂದ ಮೇರಿ ಕೊಮ್‌ನಂಥವರು, ಬಲಾತ್ಕಾರಕ್ಕೆ ಒಳಗಾದರೂ ಜೀವನ ನಿಂತಿಲ್ಲ ಎಂದುಕೊಂಡು ದಿಟ್ಟತನದಿಂದ ಹೋರಾಡಿದ ಸುಜೆಟ್ ಜಾರ್ಡನ್‌ನಂಥವರು, ಹೀರೋಗಳು ಎತ್ತ ನೋಡಿದರೂ ಸಿಗುತ್ತಾರೆ. ಸಾಂಪ್ರದಾಯಿಕ ಮಾಧ್ಯಮಗಳ ಕಾಲದಲ್ಲಿ ಈ ಹೀರೋಗಳ ಒಂದು ಮುಖ ಮಾತ್ರ ಕಂಡುಬರುತ್ತಿದ್ದರೆ, ಈ ಡಿಜಿಟಲ್ ಲೋಕದಲ್ಲಿ ಪ್ರತಿಯೊಂದು ಪಬ್ಲಿಕ್ ಫಿಗರ್‌ನ ಎಲ್ಲ ಮುಖಗಳೂ ಪಬ್ಲಿಕ್‌ಗಾಗಿ ಬಣ್ಣರಹಿತ ಕನ್ನಡಿಯಿಂದ ಪ್ರತಿಬಿಂಬ–ವಾಗುತ್ತಿವೆ. ಗುಂಗಿನ ಮಧ್ಯೆ ಕಿವಿಗೊಟ್ಟು ಕೇಳಿದರೆ ಅವರ ಮನುಷ್ಯ ಗುಣದ ಕತೆಗಳು ಕೇಳಿಸುತ್ತವೆ. ಗುಡಿ ಕಟ್ಟಿ ಪೀಠದ ಮೇಲೇರಿಸಿ ಸಂಸ್ಕಾರಕ್ಕೆ ಒಳಪಡಿಸಬಾರದಷ್ಟೆ.

ಅಟ್ಟಕ್ಕೇರಿಸಿ ಕೊಂಡಾಡಿದರೆ ನಿರಾಶೆ ತಪ್ಪಿದಲ್ಲ. ಪರಿಶೀಲಿಸುವಾಗ ರಾಷ್ಟ್ರದ ಅತಿ ಮೆಚ್ಚುಗೆ ಪಡೆದವರು ಶಾಂತಿವಾದಿಯಾಗಿರಲಿಲ್ಲ. ಕೋಟ್ಯಂತರ ಜನರನ್ನು ದಶಕಗಳಿಂದ ನಗಿಸಿದ ಹಾಸ್ಯಗಾರ ತನ್ನ ಮಕ್ಕಳನ್ನು ಹಿಂಸಿಸುತ್ತಿದ್ದ. ಕುರುಡು ದ್ವೀಪದಲ್ಲಿ ತಂದೆಯ ನೀತಿಯೊಂದೇ ದೀಪಗೃಹ ಎಂದು ಅಂದುಕೊಂಡಿದ್ದಾಗ ಅವನು ಆ ದ್ವೀಪದ ಮತ್ತೊಂದು ಕುರುಡು ನಿವಾಸಿಯಷ್ಟೆ. ಸಿನಿಕಲ್ ಟೈಮ್ಸ್ ಇವು. ನಿಜ ಜೀವನದ ಹೀರೋಗಳು ನಾವೇರಿಸಿರುವ ಪೀಠದಿಂದ ಕೆಳಗೆ ಉದುರುತ್ತಲೇ ಇರುತ್ತಾರೆ. ಆದರೆ ನೈಜಲೋಕದ ಪಾತ್ರಗಳಷ್ಟೇ ಪ್ರಭಾವಶಾಲಿಯಾದ ಸಾಹಿತ್ಯ ಲೋಕದ ಹೀರೋಗಳನ್ನಾದರೂ ಉಳಿಸಬೇಕಿತ್ತು. ಅಟಿಕಸ್ ಫಿಂಚ್‌ನ ಆ ಬಣ್ಣದ ಕನ್ನಡಕದ ನೋಟವೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು. ಅವನ ಕತೆಯ ಉತ್ತರ ಭಾಗವು ಹೇಳದ ಕತೆಯಾಗಿಯೇ ಉಳಿದಿದ್ದರೇ ಒಳ್ಳೆಯದಿತ್ತು. ಈಗ ಮತ್ತೊಂದು ಮುಗ್ಧತೆ ಚೂರಾಗಿದೆ. ನಿಜಲೋಕದ ಪಾಠಗಳನ್ನು ಲೆಕ್ಕಿಸದೆ ಕಾಲ್ಪನಿಕ ಪಾತ್ರಗಳನ್ನೂ ನಾವು ಗುಡಿ ಕಟ್ಟಿ ಪೀಠದ ಮೇಲೇರಿಸುತ್ತೇವೆ. ಈಗ ಅನ್ನಿಸುತ್ತಿದೆ, ಅಟಿಕಸ್‌ನ ಮುಂದುವರಿದ ಕತೆಯನ್ನು ಓದಬಾರದಿತ್ತೇನೋ.

No comments: